ಹಿಂದಿನ ಪುಟಕ್ಕೆ
ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ಭೂ ಒಡೆತನ ಯೋಜನೆ:
ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ಭೂ ಒಡೆತನ ಯೋಜನೆ
ಹಿಂದುಳಿದ ವರ್ಗಗಳಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಭೂ ರಹಿತ ಕೃಷಿ ಕಾರ್ಮಿಕರಿಗೆ ಎರಡು ಎಕರೆ ಖುಷ್ಕಿ ಅಥವಾ ಒಂದು ಎಕರೆ ತರಿ ಜಮೀನು ಖರೀದಿಸಲು ಸಹಾಯಧನ ಮತ್ತು ಸಾಲ ಸೌಲಭ್ಯ ಒದಗಿಸುವ ಮೂಲಕ ಈ ಜನಾಂಗದವರಿಗೆ ಭೂ ಒಡೆತನ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮಂಜೂರಾತಿ ನೀಡಿದೆ.
ಅರ್ಹತೆ:
1 ಫಲಾನುಭವಿಯು ಹಾಲಿ ಜಾರಿಯಲ್ಲಿರುವ 30.03.2002 ರ ಸರ್ಕಾರದ ಆದೇಶದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ ಪ್ರವರ್ಗ-1 ರಲ್ಲಿ ಸೇರಿಸಲ್ಪಟ್ಟಿದ್ದು, 1977 ರಲ್ಲಿ ಹಿಂದುಳಿದ ವರ್ಗಗಳಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸುವುದಕ್ಕೂ ಹಿಂದೆ ಆಗಿನ ರಾಜ್ಯ ಸರ್ಕಾರದ ದಿನಾಂಕ:01-02-1966 ರ ಆದೇಶದಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಪಂಗಡಗಳೆಂದು ಗುರುತಿಸಲ್ಪಟ್ಟಿರಬೇಕು.
2 ಸುಸ್ತಿದಾರರಾಗಿರಬಾರದು.
3 ಭೂ ಮಾಲೀಕರು ಅಲೆಮಾರಿ / ಅರೆ ಅಲೆಮಾರಿ ಜನಾಂಗ ಹಾಗೂ ಪ್ರವರ್ಗ-1 ಕ್ಕೆ ಸೇರಿರಬಾರದು.
4 ಈ ಕಾರ್ಯಕ್ರಮದಡಿಯಲ್ಲಿ ಅಲೆಮಾರಿ ಜನಾಂಗ ಭೂ ರಹಿತ ಕಾರ್ಮಿಕರಿಗೆ ಖರೀದಿಸಲುದ್ದೇಶಿಸಿದ ಜಮೀನಿನ ಮೇಲೆ ತಂಟೆ, ತಕರಾರು P T C L ಕಾಯ್ದೆ ಉಲ್ಲಂಘನೆ, ಭೂಸುಧಾರಣೆ ಕಾಯ್ದೆ, ಲ್ಯಾಂಡ್ ಗ್ರಾಂಟ್ ಕಾನೂನು, ಅರಣ್ಯ ಕಾಯ್ದೆ ಇತ್ಯಾದಿ ಕಾಯ್ದೆಗಳ ಉಲ್ಲಂಘನೆಯಾಗಿರಬಾರದು,ಖರೀದಿಗೆ ಪ್ರಸ್ತಾಪಿಸುವ ಜಮೀನು ಕೃಷಿಗೆ ಯೋಗ್ಯವಾಗಿರಬೇಕು.
5 ಖರೀದಿಗೆ ಪ್ರಸ್ತಾಪಿಸುವ ಜಮೀನು ಯಾವುದೇ ಋಣಭಾರದಿಂದ ಮುಕ್ತವಾಗಿರತಕ್ಕದ್ದು.
6 ಅರ್ಜಿದಾರರ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/- ಗಳಿಗೆ ಹಾಗೂ ನಗರ ಪ್ರದೇಶದವರಿಗೆ ರೂ.55,000/-ಗಳಿಗಿಂತ ಮೀರಿರಬಾರದು.
ಘಟಕ ವೆಚ್ಚ:
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಅಲೆಮಾರಿ ಜನಾಂಗದ ಭೂ ಒಡೆತನ ಯೋಜನೆಯಲ್ಲಿ ಗರಿಷ್ಠ ರೂ.5.00 ಲಕ್ಷಗಳಿಗೆ ನಿಗದಿಪಡಿಸಿದೆ. ಈ ಮೊತ್ತಕ್ಕಿಂತ ಹೆಚ್ಚಾದಲ್ಲಿ ಅಂತಹ ಪ್ರಕರಣಗಳನ್ನು ಕಂದಾಯ ಇಲಾಖೆ ಅನುಮೋದನೆ ಪಡೆಯಲು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಪ್ರಸ್ತಾವನೆ ಸಲ್ಲಿಸಲು ತಿಳಿಸಿದೆ.
ನಿಗಮದಿಂದ ನೀಡಲಾಗುವ ಸಹಾಯಧನ ಮತ್ತು ಸಾಲದ ಮೊತ್ತ:
ಘಟಕ ವೆಚ್ಚದ ಶೇಕಡ 50 ಭಾಗ ಸಹಾಯಧನ ಮತ್ತು ಇನ್ನುಳಿದ ಶೇಕಡ 50 ಭಾಗವನ್ನು ಅವಧಿ ಸಾಲವನ್ನಾಗಿ (term loan) ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ನೀಡಬೇಕು. ಅವಧಿ ಸಾಲಕ್ಕೆ ಶೇಕಡ 6 ರಂತೆ ವಾರ್ಷಿಕ ಬಡ್ಡಿಯನ್ನು ವಿಧಿಸಲಾಗುವುದು.
ಈ ಕಾರ್ಯಕ್ರಮದ ಅನುಷ್ಠಾನ ಕುರಿತಂತೆ ಫಲಾನುಭವಿಗಳ ಆಯ್ಕೆ, ಅರ್ಜಿ ಸಲ್ಲಿಸುವ ವಿಧಾನ, ದಾಖಲೆಗಳ ನಿರ್ವಹಣೆ (D ocum entation) ಇತ್ಯಾದಿ ಕುರಿತಂತೆ ಡಾ:ಅಂಬೇಡ್ಕರ್ ಅಭಿವೃದ್ಧಿ ನಿಗಮವು ಅನುಸರಿಸುತ್ತಿರುವ ಮಾದರಿಯನ್ನೇ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದಧಿ ನಿಗಮ ಅಳವಡಿಸಿಕೊಳ್ಳಬೇಕು.